ಬೆಂಗಳೂರು, ಜುಲೈ, 28,2026 (www.justkannada.in): ಮೇಕೆದಾಟು ಸಮತೋಲನ ಜಲಾಶಯ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಿ, ತಕ್ಷಣವೇ ಯೋಜನೆಗೆ ಚಾಲನೆ ನೀಡಿ ತಮ್ಮ ಅಧಿಕಾರಾವಧಿಯೊಳಗೆ ಪೂರ್ಣಗೊಳಿಸುವಂತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರದ ಮೂಲಕ ಆಗ್ರಹಿಸಿದ್ದಾರೆ.
2018ರಲ್ಲಿಯೇ ಸರ್ವೋಚ್ಚ ನ್ಯಾಯಾಲಯವು ಮೇಕೆದಾಟು ಯೋಜನೆಗೆ ನೆರೆ ರಾಜ್ಯಗಳ ಸಮ್ಮತಿ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಕಾರಣಗಳಿಂದ ಯೋಜನೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿವೆ ಎಂದು ಅವರು ಆರೋಪಿಸಿದ್ದಾರೆ.
ತಮಿಳುನಾಡಿನ ರಾಜಕೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಬಿಜೆಪಿ ಸರ್ಕಾರ ಜಲಶಕ್ತಿ ಸಚಿವಾಲಯದ ಮೂಲಕ ಅನುಮತಿಗಳನ್ನು ಇಷ್ಟು ದಿವಸ ತಡೆ ಹಿಡಿದದ್ದು ಖಂಡನೀಯ ಎಂದು ತಿಳಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ನೆರೆಹೊರೆ ರಾಜ್ಯಗಳ ಸಮ್ಮತಿ ಬೇಕಿಲ್ಲ ಎಂಬ ಸ್ಪಷ್ಟನೆ ನೀಡಿದೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೇಕೆದಾಟು ಯೋಜನೆಯ ಹೆಸರಿನಲ್ಲಿ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದರೂ, ಎರಡು ವರ್ಷಗಳ ಆಡಳಿತದಲ್ಲಿ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ. ಇದೇ ವೇಳೆ, ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ಕೇಂದ್ರದ ಮುಂದೆ ಧ್ವನಿ ಎತ್ತಲು ವಿಫಲವಾಗಿರುವ ಕರ್ನಾಟಕದ ಬಿಜೆಪಿ ಸಂಸದರೂ ತಮ್ಮ ಜವಾಬ್ದಾರಿಯಿಂದ ವಿಮುಖರಾಗಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕೋಟ್ಯಾಂತರ ಜನರ ಕುಡಿಯುವ ನೀರಿನ ಭವಿಷ್ಯವನ್ನು ರಾಜಕೀಯದ ವಿಷಯವನ್ನಾಗಿಸದೆ, ಮೇಕೆದಾಟು ಯೋಜನೆಯನ್ನು ಜನರ ಬದುಕಿನ ಹಕ್ಕಿನ ಯೋಜನೆಯಾಗಿ ಪರಿಗಣಿಸಿ ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಡಾ. ಮುಖ್ಯಮಂತ್ರಿ ಚಂದ್ರು ಅವರು ಒತ್ತಾಯಿಸಿದ್ದಾರೆ.
Key words: Mekedatu project, Mukyamantri Chandru, CM DK Shivakumar
The post ಮೇಕೆದಾಟು ಯೋಜನೆ ತಕ್ಷಣ ಆರಂಭಿಸಿ ಎರಡು ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




