ಮೈಸೂರು,ಮೇ,23,2026 (www.justkannada.in): “ಒಬ್ಬ ಶಿಕ್ಷಣ ಸಚಿವನಾಗಿ ಸಾಹಿತಿ ದೇವನೂರು ಮಹದೇವ ಅವರ ಸಲಹೆ ಪಡೆಯಲು ಭೇಟಿ ಮಾಡಿದ್ದೇನೆ. ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದೇವೆ. ಅದರ ಫಲವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ” ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, “ನನ್ನ ಮೇಲೆ ಸಾಕಷ್ಟು ಟೀಕೆ-ಟಿಪ್ಪಣಿಗಳು ಬಂದಿದ್ದವು. ಆದರೆ ನಾವು ಶಿಕ್ಷಣ ಇಲಾಖೆಯಲ್ಲಿ ಗಂಭೀರ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು, ಸಂಪೂರ್ಣ ವೆಬ್‌ಕಾಸ್ಟ್ ಆಗಿತ್ತು. ಅದನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ” ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಶಿಕ್ಷಣ ಮಟ್ಟ ಸುಧಾರಿಸಿರುವುದಾಗಿ ಹೇಳಿದ ಸಚಿವರು, “ಸಮಾನತೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಅದನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ” ಎಂದರು.
ಸಾಹಿತಿ ದೇವನೂರು ಮಹಾದೇವ(Devanur Mahadeva) ಅವರೊಂದಿಗೆ ನಡೆದ ಚರ್ಚೆಯಲ್ಲಿ ಮಕ್ಕಳಿಗೆ ಕಲೆ, ನಾಟಕ ಹಾಗೂ ಸಾಹಿತ್ಯದ ಅರಿವು ಮೂಡಿಸುವ ಕುರಿತು ಸಲಹೆ ಪಡೆದಿರುವುದಾಗಿ ಹೇಳಿದರು. ಜೊತೆಗೆ ಕೆಪಿಎಸ್ ಶಿಕ್ಷಣದ ಕುರಿತೂ ಮಹತ್ವದ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಇದನ್ನು ಕಡ್ಡಾಯ ಮಾಡುವುದು ಸಾಧ್ಯವಿಲ್ಲ. ಯಾವ ಶಾಲೆಗೆ ಸೇರಿಸಬೇಕು ಎಂಬುದು ಪೋಷಕರು ಹಾಗೂ ಮಕ್ಕಳ ಹಕ್ಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟ ಅಭಿಪ್ರಾಯ ನೀಡಿದೆ. ಆದರೆ ಎಲ್ಲರೂ ಕನ್ನಡ ಶಾಲೆಗಳತ್ತ ಮುಖ ಮಾಡಬೇಕು ಎಂಬುದು ನಮ್ಮ ಆಶಯ” ಎಂದು ಹೇಳಿದರು.
ಇದೇ ವೇಳೆ ಶಾಲೆಗಳಿಗೆ ಕೇಸರಿ ಶಾಲು ಹಾಕಿಸಿ ಕಳುಹಿಸುವುದಾಗಿ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, “ಬಿಜೆಪಿಯವರು ಹಿಜಾಬ್ ಅಂತ ಕರೀತಾರೆ, ನಾವು ಸಮಾನತೆ ಅಂತೀವಿ. ಮೊದಲು ಕೇಂದ್ರೀಯ ವಿದ್ಯಾಲಯಗಳಲ್ಲಿ ಶಾಲು ಹಾಕಿ ಬರಲಿ, ಬಳಿಕ ನಾನು ಉತ್ತರ ಕೊಡ್ತೀನಿ” ಎಂದು ಕಿಡಿಕಾರಿದರು.
ತಮ್ಮ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸುವವರ ವಿರುದ್ಧವೂ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. “ನನ್ನ ಶೈಕ್ಷಣಿಕ ಹಿನ್ನಲೆ ಬಗ್ಗೆ ಗೇಲಿ ಮಾಡುವವರು ಮೊದಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಡಿಗ್ರಿ ಪ್ರಮಾಣಪತ್ರದ ಬಗ್ಗೆ ಮಾತನಾಡಲಿ. ನಾನು ಪಿಯುಸಿ ಮುಗಿಸಿದ್ದೇನೆ. ಬಳಿಕ ವ್ಯವಹಾರಕ್ಕೆ ಮುಂದಾದ ಕಾರಣ ಓದು ಮುಂದುವರಿಸಲಿಲ್ಲ ಅಷ್ಟೇ” ಎಂದು ತಿರುಗೇಟು ನೀಡಿದರು.
key words: education sector, Minister, Madhu Bangarappa, Devanur Mahadeva
The post ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದಿದ್ದೇವೆ: ಟೀಕಾಕಾರರಿಗೆ ಸಚಿವ ಮಧು ಬಂಗಾರಪ್ಪ ತಿರುಗೇಟು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




