ಮಂಡ್ಯ,ಜೂನ್, 30,2025 (www.justkannada.in): ನಮ್ಮ ಸರ್ಕಾರ ಬಿದ್ದೋಗತ್ತೆ ಅಂತ ಸೋತ ಗಿರಾಕಿಗಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಬಂಡೆ ರೀತಿ ಇರತ್ತೆ. 2028 ರಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರ್ತೀವಿ ಎಂದು ಘೋಷಿಸಿದ ಸಿಎಂ ಸಿದ್ದರಾಮಯ್ಯ, ನೀರಾವರಿಗೆ ನಮ್ಮ ಈ ಸರ್ಕಾರ 25 ಸಾವಿರ ಕೊಟ್ಟಿದೆ. ಬೇರೆ ಯಾವ ಸರ್ಕಾರವಾದರೂ ಈ ಮಟ್ಟದ ಅನುದಾನ ಕೊಟ್ಟಿತ್ತಾ ಎಂದು ಪ್ರಶ್ನಿಸಿದರು.
ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನಗೂ , DCM ಶಿವಕುಮಾರ್ ಅವರಿಗೂ ಸರಿ ಇಲ್ಲ ಎಂದು ಬುರುಡೆ ಬಿಡುತ್ತಿದ್ದಾರೆ. ನಾನು ಮತ್ತು ಶಿವಕುಮಾರ್ ಇಬ್ಬರೂ ಒಟ್ಟಾಗಿ, ಗಟ್ಟಿಯಾಗಿದ್ದೀವಿ. ನಮ್ಮ ಸರ್ಕಾರವೂ ಐದು ವರ್ಷ ಗ್ಯಾರಂಟಿಯಾಗಿ ಗಟ್ಟಿಯಾಗಿ ಇರುತ್ತದೆ. 2028 ರಲ್ಲೂ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಘೋಷಿಸಿದರು.
ಅಭಿವೃದ್ಧಿಗೆ ಹಣ ಇಲ್ಲ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುತ್ತಿರುವ ಬಿಜೆಪಿಯವರು ನಾಡಿನ ಜನರಿಗೆ ಉತ್ತರಿಸಬೇಕು. ದಿವಾಳಿ ಆಗಿದ್ದರೆ 25 ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಕೃಷಿ ಪ್ರಗತಿಗಾಗಿ ವರ್ಷಕ್ಕೆ 19000 ಸಾವಿರ ಕೋಟಿ ಪಂಪ್ ಸೆಟ್ ಸಬ್ಸಿಡಿಯನ್ನು ರೈತರಿಗೆ ಕೊಟ್ಟಿದ್ದೇವೆ. 92 ವರ್ಷಗಳ ಬಳಿಕ ಜೂನ್ ತಿಂಗಳಲ್ಲೇ ಭರ್ತಿ ಆಗಿರುವ ಕೆ ಅರ್ ಎಸ್ ನಲ್ಲಿ ಸ್ಮಾರಕ ನಿರ್ಮಿಸಿ ಎಂದು ಕಾವೇರಿ ನಿಗಮದ ಎಂಡಿ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಕೃಷ್ಣರಾಜಸಾಗರದ ಒಟ್ಟು 124 ಅಡಿ ಸಾಮರ್ಥ್ಯದಲ್ಲಿ 120.90 ಅಡಿ ಭರ್ತಿ ಆಗಿದೆ. ಅಣೆಕಟ್ಟೆಗೆ 49 TMC ನೀರಿನ ಸಾಮರ್ಥ್ಯವಿದೆ. 193 ವರ್ಷಗಳಲ್ಲಿ 76 ಬಾರಿ ಭರ್ತಿಯಾಗಿದೆ. 2023-24 ರಲ್ಲಿ ಬರಗಾಲವಿತ್ತು. ಈ ಕಾರಣಕ್ಕೇ “ಸಿದ್ದರಾಮಯ್ಯ ಅವರ ಕಾಲುಗುಣ ಚೆನ್ನಾಗಿಲ್ಲ, ಕಾಂಗ್ರೆಸ್ ಸರ್ಕಾರದ ಕಾಲುಗುಣ ಸರಿಯಿಲ್ಲ” ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಈಗ ಕಳೆದು ಎರಡು ವರ್ಷಗಳಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿ ಆಗುತ್ತಿದೆ. ವಿರೋಧ ಪಕ್ಷಗಳು ಮೂಡಾತ್ಮರು ಈಗ ಏನು ಹೇಳ್ತಾರೆ ಎಂದು ಸಿಎಂ ಅಣಕಿಸಿದರು.
ನಾವು ಈ ಬಾರಿ ಕಾವೇರಿ ಅಭಿವೃದ್ಧಿ ನಿಗಮಕ್ಕೆ 3000 ಕೋಟಿ ಹಣ ಕೊಟ್ಟಿದ್ದೇವೆ. ಈಗ ಟೀಕಿಸುತ್ತಿರುವವರು ಅಧಿಕಾರದಲ್ಲಿದ್ದಾಗ ಕಾವೇರಿ ನಿಗಮಕ್ಕೆ ಹಣ ಕೊಡಲಿಲ್ಲ ಎಂದು ಟೀಕಿಸಿದರು.
ಸುಳ್ಳು ಹೇಳುವ ಚಾಳಿಯಲ್ಲಿರುವ ಬಿಜೆಪಿಗೆ ರಾಜ್ಯದ ಜನ ಪೂರ್ಣ ಅಧಿಕಾರವನ್ನೇ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿ ಎರಡು ಬಾರಿ ಅಧಿಕಾರಕ್ಕೆ ಬಂದರು. ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡೇ ಅಧಿಕಾರಕ್ಕೆ ಬರಬೇಕು. ಸ್ವಂತ ಶಕ್ತಿಯಿಂದ ಸಾಧ್ಯವೇ ಇಲ್ಲ ಎಂದರು.
ನಾನು ಸುಳ್ಳು ಹೇಳಿದ್ರೆ ಜನರಿಗೆ ಗೊತ್ತಾಗಲ್ವಾ ? ಅದಕ್ಕೇ ಬಿಜೆಪಿ, ಜೆಡಿಎಸ್ ನವರು ಜನರನ್ನು ದಡ್ಡರೆಂದು ಭಾವಿಸಬಾರದು. ಜನರಿಗೆ ಸುಳ್ಳು ಹೇಳಿ ಹೋಗಬಾರದು ಎಂದರು.
ತಾಯಿ ಕಾವೇರಿಗೆ ಪೂಜೆ ಮಾಡಿ ನಾಡಿನ ಮಳೆ, ಬೆಳೆ ಹೀಗೇ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ನಾವು ಅಧಿಕಾರದಲ್ಲಿದ್ದಾಗ ಯಾವಾಗಲಾದರೂ ರೈತರಿಗೆ ಬೀಜ, ಗೊಬ್ಬರಕ್ಕೆ ತೊಂದರೆ ಮಾಡಿದ್ದೇವಾ? ಬೀಜ ಕೇಳಿದವರಿಗೆ ಗೋಲಿಬಾರ್ ಮಾಡಿದ್ದೇವಾ ಎಂದು ಪ್ರಶ್ನಿಸಿದರು.
ಕಾವೇರಿ ತಾಯಿ, ಚಾಮುಂಡೇಶ್ವರಿ ಕೃಪಾಕಟಾಕ್ಷದಿಂದ ರಾಜ್ಯ ಸುಭಿಕ್ಷವಾಗಿದೆ. ಎಲ್ಲಾ ಜಲಾಶಯಗಳೂ ತುಂಬಿವೆ. ಎಲ್ಲಾ ನಾಲೆಗಳಿಗೂ ತಕ್ಷಣದಿಂದ ನೀರು ಹರಿಸಲು ವೇದಿಕೆಯಿಂದಲೇ ಆದೇಶ ನೀಡಿದರು.
Key words: KRS, CM Siddaramaiah, 2028, Congress government,
The post 2028 ಕ್ಕೂ ನಮ್ದೆ ಸರ್ಕಾರ; ಸಿಎಂ ಸಿದ್ದರಾಮಯ್ಯ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.