ಬೆಂಗಳೂರು, ಜೂನ್,3,2025 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟಿ20 ಕ್ರಿಕೆಟ್ ಟೂರ್ನಿಯು ಅಂತಿಮ ಹಂತಕ್ಕೆ ತಲುಪಿದ್ದು ಇಂದು ಫೈನಲ್ ಪಂದ್ಯ ಗುಜರಾತ್ನ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಆರ್ಸಿಬಿ ಗೆಲುವಿಗಾಗಿ ಕರ್ನಾಟಕದಾದ್ಯಂತ ಅಭಿಮಾನಿಗಳ ಹಾರೈಕೆ, ಪ್ರಾರ್ಥನೆ ಸಲ್ಲಿಕೆಯಾಗುತ್ತಿವೆ. ಈ ಮಧ್ಯೆ ಇಂದು ಆರ್ ಸಿಬಿ ಫೈನಲ್ ಪಂದ್ಯ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡರೇ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಜೋರಾಗಿರುತ್ತದೆ. ಹೀಗಾಗಿಯೇ RCB ಗೆದ್ದರೆ ಸಂಭ್ರಮಾಚರಣೆ ನೆಪದಲ್ಲಿ ಅತಿರೇಕದ ವರ್ತನೆ ಮಾಡಬಾರದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ಆರ್ ಸಿಬಿ ಗೆದ್ದರೆ ಸಂಭ್ರಮಾಚರಣೆ ನೆಪದಲ್ಲಿ ಯಾರೂ ಅತಿರೇಕದ ವರ್ತನೆ ತೋರದಂತೆ, ಒಂದು ವೇಳೆ ತೋರಿದರೆ ಕ್ರಮ ಕೈಗೊಳ್ಳುವಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲ ಡಿಸಿಪಿಗಳು ಹಾಗೂ ಎಸಿಪಿಗಳಿಗೆ ಪೊಲೀಸ್ ಕಮಿಷನರ್ ಬಿ.ದಯಾನಂದ್ ನಿರ್ದೇಶನ ನೀಡಿದ್ದಾರೆ.
ಆರ್ಸಿಬಿ ಗೆದ್ದರೆ ಸಂಭ್ರಮಾಚರಣೆ ವೇಳೆ ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಅಭಿಮಾನದ ಹೆಸರಿನಲ್ಲಿ ಅತಿರೇಕದ ವರ್ತನೆ ತೋರುವಂತಿಲ್ಲ. ರಸ್ತೆ ತಡೆಯುವುದು, ಟೈರ್ಗೆ ಬೆಂಕಿ ಹಚ್ಚುವುದು, ವಾಹನ ತಡೆಯುವುದು. ಸಾರ್ವಜನಿಕರಿಗೆ ತೊಂದರೆ, ಶಾಂತಿಭಂಗ ಉಂಟು ಮಾಡುವಂತಿಲ್ಲ. ಈ ಬಗ್ಗೆ ನಿಗಾ ವಹಿಸುವಂತೆ ಡಿಸಿಪಿ, ಎಸಿಪಿಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.
ಆಯಾ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಲಾಗಿದೆ. ಎಂ.ಜಿ.ರಸ್ತೆ, ಕೋರಮಂಗಲ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ನಿಗಾ ಹೆಚ್ಚಿಸಲಾಗುತ್ತದೆ. ಬೆಂಗಳೂರಿನಲ್ಲಿ ಸ್ಕ್ರೀನ್ ಅಳವಡಿಸಿರುವ ಕಡೆ ಪೊಲೀಸರ ಕಣ್ಗಾವಲು ಇರಲಿದೆ. ಪೊಲೀಸರ ಅನುಮತಿ ಪಡೆಯದೆ ಸ್ಕ್ರೀನ್ ಅಳವಡಿಕೆ ಮಾಡುವಂತಿಲ್ಲ ಎಂದು ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ.
ಹಾಗೆಯೇ ಪಬ್, ಕ್ಲಬ್, ರೆಸ್ಟೋರೆಂಟ್ ಗಳು ಅವಧಿ ಮೀರಿ ಕಾರ್ಯಾಚರಣೆ ಮಾಡುವಂತಿಲ್ಲ. ರೆಸ್ಟೋರೆಂಟ್ ಗಳನ್ನು ನಿಗದಿತ ಸಮಯಕ್ಕೆ ಬಂದ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಎಲ್ಲೆಡೆ ಹೊಯ್ಸಳ ಮತ್ತು ಬೀಟ್ ಪೊಲೀಸರು ಗಸ್ತು ಕಾರ್ಯಾಚರಣೆ ಹೆಚ್ಚಿಸಿ ನಿಗಾ ವಹಿಸಲಿದ್ದಾರೆ ಎಂದು ಬಿ.ದಯಾನಂದ್ ತಿಳಿಸಿದ್ದಾರೆ.
Key words: RCB, wins, no, excessive behavior, Bengaluru Police Commissioner
The post RCB ಗೆದ್ದರೆ ಸಂಭ್ರಮಾಚರಣೆ ನೆಪದಲ್ಲಿ ಅತಿರೇಕದ ವರ್ತನೆ ಬೇಡ- ಬೆಂಗಳೂರು ಪೊಲೀಸ್ ಕಮಿಷನರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.