ಬೆಂಗಳೂರು,ಜೂನ್,7,2025 (www.justkannada.in): ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ವಿಚಾರಣಾ ಆಯೋಗದ ತನಿಖಾ ಅವಧಿಯನ್ನ ಆಗಸ್ಟ್ 1ರಿಂದ ಆಗಸ್ಟ್ 31ಕ್ಕೆ ಒಂದು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಿಂದ 11 ಜನರು ಮೃತಪಟ್ಟ ಪ್ರಕರಣಕ್ಕೆ ಆದ್ಯತೆ ನೀಡಿ, ಒಂದು ತಿಂಗಳೊಳಗಾಗಿ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಾಗಿರುವ ಕಾರಣ ಸರ್ಕಾರದಿಂದ ಈ ಆದೇಶ ಹೊರಡಿಸಲಾಗಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತ ಘಟನೆಗೆ ಸಂಬಂಧಿಸಿ ತ್ವರಿತವಾಗಿ ತನಿಖೆ ಪೂರ್ಣಗೊಳಿಸುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದಲ್ಲಿ ನಡೆಯುತ್ತಿದ್ದ ಚಾಮರಾಜನಗರ ಆಕ್ಸಿಜನ್ ದುರಂತ ಕುರಿತ ವಿಚಾರಣಾ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆಯನ್ನು ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಿ ಜೂನ್.5 ರಂದು ಅಧಿಸೂಚನೆ ಹೊರಡಿಸಿದೆ. ಘಟನೆಗೆ ಸಂಬಂಧಿಸಿ ಒಂದು ತಿಂಗಳೊಳಗೆ ತನಿಖಾ ವರದಿ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ ಮೈಕಲ್ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗವು ಆಕ್ಸಿಜನ್ ದುರಂತ ಹಾಗೂ ಕೋವಿಡ್ ಅವ್ಯವಹಾರಗಳ ತನಿಖೆ ನಡೆಸುತ್ತಿದೆ.
ಈ ಮಧ್ಯೆ ಕಾಲ್ತುಳಿತ ಘಟನೆಯ ತನಿಖೆ ತುರ್ತಾಗಿ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಆಕ್ಸಿಜನ್ ದುರಂತದ ವಿಚಾರಣಾ ಅವಧಿಯನ್ನು ಆ.1 ರಿಂದ 31ರವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶಿಸಿದೆ.
ಕೋವಿಡ್ ಅವಧಿಯಲ್ಲಿ ಔಷಧಿ, ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ಪೂರೈಕೆ ಹಾಗೂ ಕೊರತೆಯಿಂದ ಉಂಟಾದ ಸಾವುಗಳು ಹಾಗೂ ಇತ್ಯಾದಿ ವಿಷಯಗಳ ಕುರಿತಂತೆ 2021ರ ಜುಲೈ- ಆಗಸ್ಟ್ ತಿಂಗಳಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ವರದಿ ಆರೋಪಗಳ ತನಿಖೆ ನಡೆಸಲು ಜಾನ್ ಮೈಕಲ್ ಡಿ.ಕುನ್ನಾ ನೇತೃತ್ವದಲ್ಲಿ ವಿಚಾರಣಾ ಆಯೋಗ ನೇಮಿಸಿತ್ತು. ಅಲ್ಲದೇ 3 ತಿಂಗಳೊಳಗೆ ವರದಿ ಸಲ್ಲಿಸಲು 2023ಅಕ್ಟೋಬರ್ 25 ರಂದು ಅಧಿಸೂಚನೆ ಹೊರಡಿಸಿತ್ತು. ಅಕ್ಟೋಬರ್ 7 ರ ಅಧಿಸೂಚನೆಯಲ್ಲಿ ವಿಚಾರಣಾ ಆಯೋಗಕ್ಕೆ ನಿಯಮಗಳನ್ನು ನಿಗದಿಪಡಿಸಿತ್ತು. ವಿಚಾರಣಾ ಆಯೋಗದ ಅವಧಿಯನ್ನು 2025 ಡಿ.31 ರವರೆಗೆ ವಿಸ್ತರಣೆ ಮಾಡಲಾಗಿತ್ತು.
Key words: Justice Cunha, inquiry commission, investigation period, extends
The post ಆಕ್ಸಿಜನ್ ದುರಂತ: ನ್ಯಾ. ಕುನ್ಹಾ ವಿಚಾರಣಾ ಆಯೋಗದ ತನಿಖಾ ಅವಧಿ ವಿಸ್ತರಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.