ಬೆಂಗಳೂರು, ಆಗಸ್ಟ್,27,2026 (www.justkannada.in): ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರೋಗ್ಯ ಖಾತೆ ಸಚಿವ ಯು ಟಿ ಖಾದರ್ ನೇತೃತ್ವದಲ್ಲಿ ‘ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಶಿಕ್ಷಣ ಸುಧಾರಣೆಗಳ ಕುರಿತು ಸಂಪುಟ ಉಪಸಮಿತಿ’ ರಚಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಮುನ್ನಡೆಸುತ್ತಿರುವ ‘ಛಾತ್ರೋಂ ಕಿ ಗೂಂಜ್’ ವಿದ್ಯಾರ್ಥಿ ಚಳುವಳಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಆಕಾಂಕ್ಷೆಗಳನ್ನು ಅರಿತು ಸೂಕ್ತ ಸುಧಾರಣೆಗಳನ್ನು ಜಾರಿಗೆ ತರಲು ಉದ್ದೇಶಿಸಿದೆ.
ಸಚಿವ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ರಚಿಸಿರುವ ಈ ಸಂಪುಟ ಉಪಸಮಿತಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಸಚಿವರಾದ ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಅವರು ಸದಸ್ಯರಾಗಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು, ಆಕಾಂಕ್ಷೆಗಳು ಮತ್ತು ಅಭಿಪ್ರಾಯಗಳನ್ನು ಆಲಿಸಿ, ವಿದ್ಯಾರ್ಥಿಗಳು ಹಾಗೂ ಯುವಜನರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಒದಗಿಸುವಂತಹ ಶಿಕ್ಷಣ ಸುಧಾರಣೆಗಳನ್ನು ಶಿಫಾರಸು ಮಾಡುವಂತೆ ಸಮಿತಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.
ಯುವಜನರ ಭವಿಷ್ಯಕ್ಕೆ ಗುಣಮಟ್ಟದ ಶಿಕ್ಷಣ
ರಾಜ್ಯದ ಭವಿಷ್ಯ ಯುವಜನರ ಮೇಲೆ ನಿಂತಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ, ಅಗತ್ಯ ಮೂಲಸೌಕರ್ಯ ಹಾಗೂ ಸಮರ್ಪಕ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ರಾಜ್ಯದ ಯುವಜನರ ಸಮಸ್ಯೆಗಳು ಹಾಗೂ ಭಾವನೆಗಳನ್ನು ಅರ್ಥಮಾಡಿಕೊಂಡು, ಅವರ ಆಕಾಂಕ್ಷೆಗಳಿಗೆ ಸ್ಪಂದಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಂದ ಬರುವ ಸಲಹೆ-ಸೂಚನೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು. ಎಲ್ಲರೂ ಒಟ್ಟಾಗಿ ಯುವಜನರಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
Key words: Cabinet, subcommittee, student issues, improve, education
The post ವಿದ್ಯಾರ್ಥಿಗಳ ಸಮಸ್ಯೆ, ಶಿಕ್ಷಣ ಸುಧಾರಣೆಗೆ ಸಂಪುಟ ಉಪಸಮಿತಿ ರಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




