ಮೈಸೂರು,ಜೂನ್,16,2025 (www.justkannada.in): ಸಿದ್ದರಾಮಯ್ಯ ಬಿಟ್ಟರೆ ಸಿಎಂ ಆಗುವ ವ್ಯಕ್ತಿ ಯಾರು ಇಲ್ಲ. ಸಿದ್ದರಾಮಯ್ಯ ಹೋದರೆ ರಾಜ್ಯ ರೌಡಿಗಳ ಕೈಗೆ ಸೇರುತ್ತದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಇಂದು ಮೈಸೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಸಿದ್ದರಾಮಯ್ಯ ಖಡಕ್ ರಾಜಕಾರಣಿ. ಎರಡನೇ ಬಾರಿ ಸಿಎಂ ಅದ ಮೇಲೆ ಮೊದಲಿದ್ದ ಗತ್ತು ಗಮ್ಮತ್ತು ಇಲ್ಲ. ಅವರು ವೈಯಕ್ತಿಕವಾಗಿ ಒಳ್ಳೆ ಮನುಷ್ಯ ಆದರೆ ಈಗ ಆಡಳಿತದಲ್ಲಿ ಯಾಕೋ ಗತ್ತು ಗಮ್ಮತ್ತು ಕಾಣಿಸುತ್ತಿಲ್ಲ ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್, ಸಿದ್ದರಾಮಯ್ಯ ಇರುವುದರಿಂದ ಒಂದಷ್ಟು ಮರ್ಯಾದೆ ಇದೆ. ಸಿದ್ದರಾಮಯ್ಯ ಹೋದರೇ ರಾಜ್ಯ ರೌಡಿಗಳು ಕೈಯಲ್ಲಿ ಸೇರುತ್ತೆ. ಸಿಎಂ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು. ಆರೋಗ್ಯ ಇದ್ದರೆ ಮುಂದೇನು ಅವರೇ ಆಗಲಿ. ಮಾಧ್ಯಮದವರು ಒಬ್ಬೊಬ್ಬರಿಗೆ ಒಂದು ಹೆಸರನ್ನು ಇಟ್ಟಿದ್ದೀರಾ. ರಾಜಾಹುಲಿ, ಮರಿಹುಲಿ, ಬಂಡೆ, ಇನ್ನೂ ಏನೇನೋ ಹೆಸರು ಇಟ್ಟಿದ್ದೀರಾ. ರಾಜ್ಯದಲ್ಲಿ ಯಡಿಯೂರಪ್ಪ ಕುಮಾರಸ್ವಾಮಿ ಕಾಲದಲ್ಲಿ ಮಂತ್ರಿಗಳ ವ್ಯಾಪಾರ ಶುರು ಆಯ್ತು. ರಾಜ್ಯಕ್ಕೆ ಸಾಕಷ್ಟು ನಷ್ಟ ಆಯ್ತು. ಯಡಿಯೂರಪ್ಪನವರ ಮೇಲೆ ನನಗೆ ವೈಯಕ್ತಿಕವಾಗಿ ಏನು ಇಲ್ಲ. ಆದರೆ ಅವರ ಕಾಲದಲ್ಲಿ ಈ ಶಾಸಕರ ವ್ಯಾಪಾರ ಶುರು ಆಯಿತು ಎಂದು ಟೀಕಿಸಿದರು.
ಇವತ್ತಿನ ಪರಿಸ್ಥಿತಿಗೆ ಸಿದ್ದರಾಮಯ್ಯ ರಾಜ್ಯಕ್ಕೆ ಬೇಕು
ಸಿದ್ದರಾಮಯ್ಯ ಸುತ್ತ ಗ್ರಹಗಳು ಸುತ್ತುತ್ತಿದೆ. ಅವರು ಎಲ್ಲಿ ಕರೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಎಚ್ಚರಿಕೆಯಿಂದ ಇರಬೇಕು. ನಂಗೇನೂ ಸಿದ್ದರಾಮಯ್ಯ ಮೇಲೆ ಸಾಫ್ಟ್ ಕಾರ್ನರ್ ಇಲ್ಲ. ಅವರೇನು ನನ್ನ ಎಂ.ಎಲ್.ಸಿ ಮಾಡ್ಲಿಲ್ಲ. ಭೂಮಿ ಕೊಟ್ಟಿಲ್ಲ, ಆದರೆ ವೈಯಕ್ತಿಕವಾಗಿ ಒಳ್ಳೆ ವ್ಯಕ್ತಿ . ನನ್ನ ಹಾಗೂ ನನ್ನ ಹೋರಾಟವನ್ನು ಯಾವಾಗಲೂ ಹೊಗಳುತ್ತಾರೆ. ಸದ್ಯ ರಾಜ್ಯದಲ್ಲಿ ಸಿದ್ದರಾಮಯ್ಯ ಬಿಟ್ಟರೆ ಸಿಎಂ ಆಗುವ ವ್ಯಕ್ತಿ ಯಾರು ಇಲ್ಲ. ಇವತ್ತಿನ ಪರಿಸ್ಥಿತಿಗೆ ಸಿದ್ದರಾಮಯ್ಯ ರಾಜ್ಯಕ್ಕೆ ಬೇಕು ಎಂದು ನುಡಿದರು.
ರಾಜಕಾರಣ ಇಂದು ಹಾಳಾಗುತ್ತಿದೆ ಪರಪ್ಪನ ಅಗ್ರಹಾರದಿಂದ ಕರೆದುಕೊಂಡು ಬಂದು ಮಂತ್ರಿ ಮಾಡುವ ತನಕ ಈ ರಾಜ್ಯ ಬಂದಿದೆ ಎಂದು ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ಕಾವೇರಿ ಆರತಿ ಬೇಕಾಗಿಲ್ಲ
ಕಾವೇರಿ ಆರತಿ ಬೇಕಾಗಿಲ್ಲ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಕನ್ನಂಬಾಡಿಗೆ ಇರುವ ಸೌಂದರ್ಯ ಎಲ್ಲವೂ ಹೋಗತ್ತೆ. ಯಾವ ಪಾರ್ಕ್ ಕೂಡ ಕೆ.ಆರ್.ಎಸ್ ನಲ್ಲಿ ಮಾಡೋದು ಬೇಡ ಎಂದು ವಾಟಾಳ್ ನಾಗರಾಜ್ ಹೇಳಿದರು.
ವಿವಿಧ ಬೇಡಿಕೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ.
ನಗರದ ಹಾರ್ಡಿಂಜ್ ವೃತ್ತದಲ್ಲಿ ವಿವಿಧ ಬೇಡಿಕೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ರಾಜ್ಯದ ತೋತಾಪುರಿ ಮಾವಿನ ಹಣ್ಣಿಗೆ ಆಂದ್ರ ಪ್ರದೇಶದ ಸರ್ಕಾರ ನಿಷೇಧ ಏರಿಕೆ ಮತ್ತು ಚಾಮುಂಡಿ ಬೆಟ್ಟಕ್ಕೆ ವಿಶೇಷ ದರ್ಶನಕ್ಕೆಂದು 2 ಸಾವಿರ ನಿಗದಿ ಮತ್ತು ಕೆಆರ್ ಎಸ್ ಅಣೇಕಟ್ಟು ಬಳಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಸೇರಿದಂತೆ ವಿವಿಧ ವಿಚಾರಗಳನ್ನ ಖಂಡಿಸಿ ಪ್ರತಿಭಟನೆ ನಡೆಸಿದರು.
ವಾಟಾಳ್ ಪ್ರತಿಭಟನೆಗೆ ಸ್ಥಳೀಯ ಕನ್ನಟಪರ ಸಂಘಟಕರು ಬೆಂಬಲ ನೀಡಿದರು. ಆಂಧ್ರಪ್ರದೇಶ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ವಾಟಾಳ್ ನಾಗರಾಜ್, ನಮ್ಮ ರಾಜ್ಯದ ರೈತರು ಬೆಳೆದ ಮಾವು ನಿಷೇಧ ಆದೇಶ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಕರ್ನಾಟಕ ಆಂದ್ರ ಗಡಿ ಬಂದ್ ಮಾಡಲಾಗುತ್ತದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಆಂಧ್ರದಲ್ಲಿ ರಾಜ್ಯದ ತೋತಾಪುರಿ ಮಾವಿನಕಾಯಿ ನಿಷೇಧ ಇದು ನಿಜಕ್ಕೂ ಖಂಡನೀಯ. ಈಗ ರೈತರಿಗೆ ಗಂಭೀರವಾದ ಪರಿಸ್ಥಿತಿ ಎದುರಾಗಿದೆ. ಲಕ್ಷಾಂತರ ರೂಪಾಯಿ ಮಾವಿನಕಾಯಿ ದೇಶದಿಂದ ದೇಶಕ್ಕೆ ಹೋಗುತ್ತವೆ. ಶ್ರೀನಿವಾಸಪುರ ಅಲ್ಲಿ ತೋತಾಪುರಿ ಹೆಚ್ಚಾಗಿ ಬೆಳೆಯುತ್ತಾರೆ. ಆಂಧ್ರದ ತಿರುಪತಿ ದೇವಸ್ಥಾಕ್ಕೆ 40% ಜನ ಹೋಗುತ್ತಾರೆ. ಅಲ್ಲಿನ ಲಡ್ಡುಗೆ ನಮ್ಮ ನಂದಿನಿ ತುಪ್ಪ ಕೊಡುತ್ತೀವಿ. ಗಂಧದ ಮರವನ್ನು ಸಹ ಕೊಟ್ಟಿದ್ದಿವೆ. ಇಷ್ಟಿದ್ದರೂ ನಮ್ಮ ಮಾವಿನಕಾಯಿ ನಿಷೇಧ ಮಾಡಿದ್ದಾರೆ. ಈ ಕೂಡಲೇ ನಿಷೇಧ ಹಿಂಪಡೆಯಬೇಕು. ಇಲ್ಲದಿದ್ದರೆ ನಾವು ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗತ್ತೆ ಎಂದು ಎಚ್ಚರಿಕೆ ನೀಡಿದರು.
ಚಾಮುಂಡಿ ಬೆಟ್ಟದಲ್ಲಿ ಪೂಜಾ ಶುಲ್ಕ ಏರಿಕೆಯನ್ನು ಈ ಕೂಡಲೇ ಕಡಿಮೆ ಮಾಡಬೇಕು. ಆಷಾಢ ಮಾಸದಲ್ಲಿ 2 ಸಾವಿರ ರೂಪಾಯಿ ಟಿಕೆಟ್ ಈ ಕೂಡಲೇ ರದ್ದು ಮಾಡ್ಬೇಕು. ಜನ ಸಾಮಾನ್ಯರಿಗೆ ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ದುಡ್ಡಿಗಾಗಿ ಶ್ರೀಮಂತರಿಗೆ ಟಿಕೆಟ್ ಮಾಡಿ ಕರೆದುಕೊಂಡು ಹೋಗೋದು ಸರಿಯಿಲ್ಲ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವ್ಯಾಪಾರೀಕರಣ ಮಾಡೋದು ಸರಿಯಿಲ್ಲ ಎಂದು ಸರ್ಕಾರದ ವಿರುದ್ದ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
Key words: Mysore, CM , Siddaramaiah, Vatal Nagaraj
The post ಸಿದ್ದರಾಮಯ್ಯ ಬಿಟ್ರೆ ಸಿಎಂ ಆಗೋ ವ್ಯಕ್ತಿ ಯಾರು ಇಲ್ಲ: ಅವರು ಹೋದ್ರೆ ರಾಜ್ಯ ರೌಡಿಗಳ ಕೈಗೆ -ವಾಟಾಳ್ ನಾಗರಾಜ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




